Wednesday, April 8, 2015

ರಾಜ ಬಾರೋ ಬಾರೋ ....!

"ಶ್ರೀಕಾಂತೂ ಶ್ರೀಕಾಂತೂ.. "

ಕಣ್ಣು ಬಿಟ್ಟೆ ಎದುರಿಗೆ ಕೂತಿದ್ದ.. ದೇಶಾವಾರಿ ಹಲ್ಲು ಬಿಡುತ್ತಾ ಗಹಗಹಿಸಿ ನಗುತ್ತಿದ್ದ.. 

ಅವನ ಟ್ರೇಡ್ ಮಾರ್ಕ್ ನಗು.. ನಾವೆಲ್ಲಾ ಏನಲೇ ಒಳ್ಳೆ ತೂಗುದೀಪ ಶ್ರೀನಿವಾಸ ತರಹ ನಗ್ತೀಯ ಅಂತಾ ಯಾವಾಗಲೂ ತಮಾಷೆ ಮಾಡುತ್ತಲೇ ಇದ್ದೆವು. 

ಇವನೇ ಇವನೇ ರಾಜ ನನ್ನ ಪ್ರೀತಿಯ ಸೋದರಮಾವ.. ಒಂದು ರೀತಿಯಲ್ಲಿ ನಮ್ಮ ಮನೆಯಲ್ಲಿ ಅಗ್ರಜನ ಸ್ಥಾನ ಇವನಿಗೆ ಮೀಸಲಿತ್ತು. 

ನಮ್ಮ ಮನೆಯ ಯಾವ ಸಮಾರಂಭವೂ ಇವನಿಲ್ಲದೆ ಪೂರ್ಣ ಎನಿಸುತ್ತಲಿರಲಿಲ್ಲ. ಇಂದಿಗೂ ಕೂಡ ನಮ್ಮ ಮನೆಯ ಪ್ರತಿ ಸಂಭ್ರಮದಲ್ಲೂ ಅಥವಾ ಬೇರೆ ರೀತಿಯ ವಿಷಯಗಳಲ್ಲಿಯೂ ಇವನ ಪ್ರಸ್ತಾಪವಿಲ್ಲದೆ ಮಾತಿಲ್ಲ ಕಥೆಯಿಲ್ಲ. ಅಷ್ಟರ ಮಟ್ಟಿಗೆ ನಮ್ಮ ಮನೆಯಲ್ಲಿ ಬೆರೆತು ಹೋಗಿದ್ದಾನೆ. 

ನನ್ನ ಎಲ್ಲಾ ಕರೆಗಳಿಗೂ ಇವನ ಉತ್ತರ "ನಡೆಯೋ ನಾ ಇದ್ದೀನಿ.. ನಾ ಬರ್ತೀನಿ.. ಹೋಗಲೋ ನನ್ನ ಬಿಟ್ಟು ಹೋಗ್ತೀಯೇನೋ.. " ಅವನು ನನ್ನ ಜೊತೆಯಲ್ಲಿದ್ದಾನೆ ಅಂದರೆ ನನಗೆ ನೂರಾನೆ ಜೊತೆಯಲ್ಲಿದ್ದಂತೆ ಭಾಸವಾಗುತ್ತಿತ್ತು. 

**************

ಒಮ್ಮೆ ತುಮಕೂರು ಬಳಿಯ ಶಿವಗಂಗೆ ಬೆಟ್ಟಕ್ಕೆ ಬೈಕ್ ನಲ್ಲಿ ನಮ್ಮ ಮನೆಯವರೆಲ್ಲರೂ ಹೋಗುವುದೆಂದು ತೀರ್ಮಾನವಾಯಿತು. ಸರಿ ನನ್ನ ಬೈಕ್, ಅಣ್ಣನ ಬೈಕ್ ಮತ್ತು ತಮ್ಮನ ಬೈಕ್ ಸಿದ್ಧವಾಯಿತು. ಮೂರು ಗಾಡಿ ಮೂರು ಜೋಡಿ, ಜೊತೆಯಲ್ಲಿ ಅಣ್ಣನ ಮಗಳು ಮತ್ತು ನನ್ನ ಮಗಳು (ತೀರ ಚಿಕ್ಕದು ಸುಮಾರು ಒಂದೂವರೆ ವರ್ಷದ ಕೂಸು). ಅಕ್ಕ ಮತ್ತು ಅಕ್ಕನ ಮಗ ಜಾಲಹಳ್ಳಿ ಕ್ರಾಸ್ ನಲ್ಲಿಯೇ ಅನಾರೋಗ್ಯದ ಪರಿಣಾಮ ವಾಪಸ್ ಹೋಗಿಬಿಟ್ಟರು. ನಾವೆಲ್ಲಾ ಸರಿ ಮುಂದುವರೆಸೋಣ ಎಂದು ಹೊರಟೆ ಬಿಟ್ಟೆವು.. 

ಶಿವಗಂಗೆ ತಲುಪಿ.. ಶಿವನಿಗೆ ನಮಸ್ಕರಿಸಿದಾಗ ಆಗಲೇ ಮಧ್ಯಾಹ್ನ ಒಂದೂವರೆ ಆಗಿತ್ತು.. ತೆಗೆದುಕೊಂಡು ಹೋಗಿದ್ದ ಊಟ ಬುತ್ತಿಯನ್ನು ಅಲ್ಲೇ ಬಿಚ್ಚಿ ಎಲ್ಲರೂ ಮುಗಿಸಿದ್ದಾಯಿತು. ಶಿವನಿಗೆ ಅರ್ಪಿಸಲೆಂದು ತಂದಿದ್ದ ತೆಂಗಿನಕಾಯಿ, ಬಾಳೆಹಣ್ಣು ಮರೆತು ನಮ್ಮ ಚೀಲದಲ್ಲಿಯೇ ಉಳಿದಿತ್ತು. 

ಮುಂದೆ ಒಳಕಲ್ ತೀರ್ಥದ ಹತ್ತಿರ ಬಂದು ನಮ್ಮ ನಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದು ಆಯ್ತು. ಅಷ್ಟರಲ್ಲಿ ಸುಮಾರು ಮೂರು ಘಂಟೆ ಆಗಿತ್ತು.. ಮುಂದೆ ಸುಮಾರು ಇನ್ನೆರಡು ಅಥವಾ ಮೂರು ಗಂಟೆಗಳ ಕಾಲ ಹತ್ತಿದ್ದರೆ ಶಿವಗಂಗೆಯ ತುತ್ತ ತುದಿಯಲ್ಲಿ ಇರುತ್ತಿದ್ದೆವು.. ಆದರೆ ಹತ್ತುವುದೋ ಇಳಿಯುವುದೋ ಎಂಬ ಗೊಂದಲ ಶುರುವಾಯಿತು. ಕಡೆಗೆ ಇಳಿಯುವುದೇ ಸರಿ ಎಂಬ ತೀರ್ಮಾನಕ್ಕೆ ಬಂದೆವು... 

ನಿಧಾನವಾಗಿ ಅದು ಇದು ಹರಟುತ್ತಾ ಒಬ್ಬೊಬ್ಬರಾಗಿ ಇಳಿಯಲು ಶುರುಮಾಡಿದೆವು.. ಶಿವಗಂಗೆ ಬೆಟ್ಟದ ಬುಡದಲ್ಲಿ ಒಂದು ಬೃಹದಾಕಾರ ಗಣಪನ ಕೆತ್ತನೆ ಇರುವ ಶಿಲ್ಪವಿತ್ತು. 
ಶಿವಗಂಗೆ ಬೆಟ್ಟದ ಬುಡದಲ್ಲಿರುವ ಗಣಪ..
ಇಲ್ಲಿಯೇ ನಮ್ಮ ರಾಜ ಪೂಜೆ ಮಾಡಿದ್ದು 

ನಾವೆಲ್ಲಾ "ಲೋ ರಾಜ (ನಮ್ಮ ಸೋದರಮಾವನಿಗೆ ನಾವು ಮರ್ಯಾದೆ ಕೊಡುತ್ತಿದ್ದ ರೀತಿ :-) ..... ! ) ಹೇಗಿದ್ದರೂ ಹಣ್ಣು ಕಾಯಿ ಇದೆ ಒಂದು ಲೈಟ್ ಆಗಿ ಪೂಜೆ ಮಾಡಿಯೇ ಬಿಡೋ ಅಂದೆವು.. 

ಅವನಿಗೆ ಮೂರು ವಸ್ತುಗಳ ಮೇಲೆ ಅಪಾರ ವ್ಯಾಮೋಹ.. ಪೂಜೆ, ಕನ್ನಡ ಮತ್ತು ಹಿಂದಿಯ ಹಳೆಯ ಚಿತ್ರಗಳು ಮತ್ತು ಚಿತ್ರಾನ್ನ.  ಇವು ಮೂರು ಇದ್ದರೆ ಅವನಿಗೆ ಮೂರು ಲೋಕಗಳು ಇದ್ದ ಹಾಗೆ. 

ಸರಿ ತನಗೆ ಗೊತ್ತಿದ್ದ ಎಲ್ಲಾ ಮಂತ್ರಗಳನ್ನು ಹೇಳಿ ಅಚ್ಚುಕಟ್ಟಾಗಿ .. ಗಣಪನೆ ತಲೆದೂಗುವಂತೆ ಪೂಜೆ ಮಾಡಿದ. ಹಣ್ಣು ಕಾಯಿ ನೈವೇದ್ಯ ಮಾಡಿ... ಚೆನ್ನಾಗಿ ಮಳೆ ಸುರಿಸಪ್ಪ ಎಂದಾ.. 

ನಾವೆಲ್ಲಾ ಜೋರಾಗಿ ನಕ್ಕೆವು.. ಅವನ ಬೆನ್ನಿನ ಮೇಲೆ ನಮ್ಮೆಲ್ಲರ ಪ್ರೀತಿಯನ್ನು ತೋರಿಸಿದೆವು.. 

ಆ ಕ್ಷಣದಲ್ಲಿ ಮಳೆ ಬರುವ ಯಾವುದೇ ಸೂಚನೆ ಕೂಡ ಇರಲ್ಲಿಲ್ಲ.. ಸ್ವಚ್ಛ ಆಗಸ ಅಲ್ಲಿ ಇಲ್ಲಿ ಕನ್ನಡದ ಡಬ್ಬ ಚಿತ್ರಗಳಿಗೆ ಚಿತ್ರಮಂದಿರದಲ್ಲಿ ಇರುವ ಪ್ರೇಕ್ಷಕರ ಹಾಗೆ ಮೋಡಗಳು ಚದುರಿದ್ದವು.. ಹವಾಮಾನ ಇಲಾಖೆ ಕೂಡ ಮಳೆ ಬರೋಲ್ಲ ಅಂತ ಎದೆ ತಟ್ಟಿಕೊಂಡು ಹೇಳಬಹುದಾದ ರೀತಿ ಇತ್ತು ಅಂದಿನ ಪರಿಸ್ಥಿತಿ. 

ಶಿವಗಂಗೆಯಿಂದ ದಾಬಸಪೇಟೆಗೆ ಬಂದೆವು.. ಅಣ್ಣನ ಗಾಡಿಯಲ್ಲಿ ಪೆಟ್ರೋಲ್ ಸಮಸ್ಯೆ ತಲೆದೋರಿತ್ತು.. ಸರಿ ತಮ್ಮನ ಗಾಡಿಯಿಂದ ಸ್ವಲ್ಪ ಮಟ್ಟಿಗೆ ಪೆಟ್ರೋಲ್ ಬಗ್ಗಿಸಿ ಮತ್ತೆ ಹೊರಟೆವು.. ಕೇವಲ ಮೂರು ನಾಲ್ಕು ಕಿ ಮೀ ಗಳು ಬಂದಿದ್ದವು ಅಷ್ಟೇ.. ಶುರುವಾಯ್ತು ಗುಡುಗು ಮಿಂಚು ಸಿಡಿಲಿನ ಮಳೆ.. 


ಶಿವಗಂಗೆ ಪ್ರವಾಸದಲ್ಲಿ ನೆಂದು ನಾಯಿಯಾಗಿದ್ದ ನಮಗೆ ಆಶ್ರಯ ನೀಡಿದ ತಂಗುದಾಣ 

ಅಲ್ಲೇ ಇದ್ದ ಒಂದು ಚಿಕ್ಕ ತಂಗುದಾಣದಲ್ಲಿ ನಿಂತೆವು.. ಎರಡು ಚಿಕ್ಕ ಚಿಕ್ಕ ಮಕ್ಕಳು ಒಂದಕ್ಕೆ ಸುಮಾರು ನಾಲ್ಕೈದು ವರ್ಷ, ಇನ್ನೊಂದಕ್ಕೆ ಒಂದೂವರೆ ವರ್ಷ, ನಡುಗುತ್ತ ಬೆದರುತ್ತಾ ಮಳೆಯಲ್ಲಿ ನಿಂತೆವು. 

ಅಣ್ಣನ ಗಾಡಿಯಲ್ಲಿ ಪೆಟ್ರೋಲ್  ಖಾಲಿ ಆಗಿತ್ತು. ರಾಜ ಮತ್ತು ತಮ್ಮ ಮುರುಳಿ ಪೆಟ್ರೋಲ್ ತರಲು ನೆಲಮಂಗಲದ ಹತ್ತಿರ ಹೋದರು. ನಮಗೆಲ್ಲ ಹೊಟ್ಟೆ ಹಸಿವು. ಜೊತೆಯಲ್ಲಿ ಕಂದಮ್ಮಗಳು ಚಳಿಗೆ ಮತ್ತು ಹಸಿವಿಗೆ ತೋಡಿ ರಾಗ ಶುರುಮಾಡಿದ್ದವು. ಅಲ್ಲಿಯೇ ಇದ್ದ ಒಂದು ಪೆಟ್ಟಿಗೆ ಅಂಗಡಿಯಲ್ಲಿ ಬಿಸ್ಕತ್ ತಂದು ತಿಂದೆವು.  ಬೇರೆ ದಾರಿ ಕಾಣಲಿಲ್ಲ, ಜೊತೆಯಲ್ಲಿ ಮಳೆಯೂ ಕೂಡ ಕಡಿಮೆ ಆಗುವ ಯಾವ ಲಕ್ಷಣಗಳನ್ನು ತೋರಲಿಲ್ಲ.. 

ಸುಮಾರು ಎಂಟು ಘಂಟೆಗೆ ಅಲ್ಲಿಂದ ಮಳೆಯಲ್ಲಿಯೇ ಹೊರಟೆವು.. ಮುಂದಿನ ಸುಮಾರು ಎರಡು ಘಂಟೆಗಳು ಮಳೆಯಲ್ಲಿ ನೆಂದ ನಾಯಿಯಾಗಿದ್ದೆವು. ಮಕ್ಕಳನ್ನು ಎದೆಗೆ ಅವುಚಿಕೊಂಡು ಹಾಕಿಕೊಂಡಿದ್ದ ಜರ್ಕಿನ್, ಮತ್ತು ದುಪ್ಪಟ್ಟಗಳಿಂದ ಸುತ್ತಿಕೊಂಡು ಗಡ ಗಡ ನಡುಗುತ್ತಲೇ ಆ ಗುಡುಗು ಸಿಡಿಲು ಮಳೆಯಲ್ಲಿ ನೆನೆಯುತ್ತಾ ವಿಜಯನಗರದ ಮನೆ ಸೇರಿದಾಗ ಸುಸ್ತೋ ಸುಸ್ತೋ... 

ಅಮ್ಮ ಬೇಗನೆ ಬಿಸಿ ಬಿಸಿ ಅಡಿಗೆ ಮಾಡಿದರು.. ಅದಕ್ಕೆ ಮುಂಚೆ ನಮಗೆ ತ್ರಾಣ ನೀಡಿದ ಬಿಸಿ ಬಿಸಿ (ನನಗೆ ಮಾತ್ರ ತಣ್ಣನೆ) ಕಾಫಿ ಕುಡಿದು.. ರಾಜನ ಕಡೆ ವಕ್ರ ದೃಷ್ಟಿ ಬೀರಿದೆವು.. 

ಅವನು ಉಹಾ ಉಹಾ ಹ ಹಃ   ಹ ಹಃ.. ಎಂದು ನಗಲು ಶುರುಮಾಡಿದ.. 

"ಮಗನೆ ಎಂಥ ಸುಡುಗಾಡು ಬಾಯಿ ನಿಂದು.. ನಿನಗೆ ಪೂಜೆ ಮಾಡು ಅಂತ ಹೇಳಿದೆವು.. ಮಳೆ ಬರಿಸಪ್ಪ ಅದರಲ್ಲೂ ಚೆನ್ನಾಗಿ ಮಳೆ ಬರಿಸಪ್ಪ ಅಂತ ಯಾಕಲೇ ಬೇಡಿಕೊಂಡೆ" ಎಂದು ಬಾಯಿಗೆ ಬಂದಂತೆ ಬಯ್ದೆವು.. ಜೊತೆಯಲ್ಲಿ ನಗುತ್ತಲೇ ಇದ್ದೆವು.. 

ಅಂಥಹ ಮಗುವಿನಂಥ ಮನಸು ಅವನದು.. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಣ್ಣಾವ್ರು ಭೋಜನಿಗೆ ಹೇಳುತ್ತಾರೆ "ಪ್ರಭು ನಿಮ್ಮ ಮನಸ್ಸು ಸ್ಪಟಿಕ ತರಹ" ಎಂದು ಹಾಗೆಯೇ ಈ ನಮ್ಮ ರಾಜನದು ಹಾಗೆಯೇ.. ಕಲ್ಮಶವನ್ನು ಹುಡುಕಿದರೂ ಸಿಗುತ್ತಲಿರಲ್ಲಿಲ್ಲ. 

"ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ" ಎಂಬ ಅಣ್ಣಾವ್ರ ಹಾಲು ಜೇನು ಚಿತ್ರದ ಹಾಡಿನಂತೆ .. ಇಂದು ನಿನ್ನ ಜನುಮ ದಿನ.. ಜೊತೆಯಲ್ಲಿ ನನ್ನ ವಿವಾಹ ದಿನೋತ್ಸವ ಕೂಡ.. ನೀನಿಲ್ಲದೆ ಕಳೆದ ವರ್ಷಗಳು ಏಳು ಆಗಿದ್ದರೂ ನೀನು ಏಳೇಳು ಜನ್ಮದ ಬಂಧು.. ಮುಂದಿನ ಜನ್ಮ ಎನ್ನುವುದು ಇದ್ದರೆ.. ನಾನು ನೀನು ಹೀಗೆ ಮಾವ ಅಳಿಯನ ಹಾಗೆ ಹುಟ್ಟೋಣ.. 

ಜನುಮದಿನದ ಶುಭಾಶಯಗಳು ಕಣೋ.. ಭೂಮಿಗೆ ಬಂದ ಭಗವಂತ ಚಿತ್ರದ ಹಾಡಿನಂತೆ "ನಾ ಇಲ್ಲದೆಡೆಯಿಲ್ಲ ನಾ ಇಲ್ಲದೆ ಏನಿಲ್ಲ ನಾನು ನಾನೆಂಬ ಅಜ್ಞಾನಿಗೆ ನಾನಿಲ್ಲ ನಾನಿಲ್ಲ" ಹಾಡನ್ನು ನಿನಗೆ ಮತ್ತು ನಿನ್ನ ಬದುಕಿಗೆ ಹೋಲಿಸಿದರೆ.. 
"ರಾಜ ನೀ ಇಲ್ಲದೆಡೆಯಿಲ್ಲ ನೀ ಇಲ್ಲದೆ ಏನಿಲ್ಲ.. ನಿನ್ನ ನೆನಪಿಲ್ಲದ ದಿನವಿಲ್ಲ ಕ್ಷಣವಿಲ್ಲ.. " ಎಂದು ಹಾಡಬೇಕೆನಿಸುತ್ತದೆ... 

ನಿನ್ನ ಸುಂದರ ಮನಸ್ಸಿನ ಚರಣ ಕಮಲಗಳಿಗೆ ಈ ಲೇಖನ ಅರ್ಪಿತ.. 

ನಿನ್ನ ನೆನಪಲ್ಲಿ ನೀ ಇಷ್ಟಪಡುತ್ತಿದ್ದ ನನ್ನ ಇಡಿ ಪರಿವಾರ, ನಾವು ಶಿವಗಂಗೆಯಿಂದ ವಾಪಸ್ ಬರುವಾಗ ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ನಿಂತಿದ್ದ ಜಾಗದಲ್ಲಿ, ನಿನ್ನ ನೆನಪಲ್ಲಿ ನಿಂತು ತೆಗೆಸಿಕೊಂಡ ಚಿತ್ರ ನಿನಗಾಗಿ ನಿನಗೋಸ್ಕರ.. 
ನಮ್ಮ ಕುಟುಂಬ ಆ ಸವಿನೆನಪನ್ನು ಮೆಲುಕು ಹಾಕಲು ಆ ತಂಗುದಾಣದಲ್ಲಿ ತೆಗೆಸಿಕೊಂಡ ಚಿತ್ರ
ರಾಜನ ನಿನ್ನ ಸವಿನೆನಪಿಗೆ!!  

ರಾಜ ಬಾರೋ ಬಾರೋ ಮತ್ತೊಮ್ಮೆ ಮಗದೊಮ್ಮೆ.. ಈ ಭಾಷ್ಪಂಜಲಿ ನಿನ್ನ ಸುಂದರ ಮನಸ್ಸಿಗೆ.. !!!
ಭದ್ರಾವತಿಯ ನರಸಿಂಹ ದೇವಾಲಯದ ಸನ್ನಿಧಿಯಲ್ಲಿ ..
ರಾಜ, ನನ್ನ ಅಕ್ಕ, ಅಕ್ಕನ ಮಗ, ಮಡದಿ ಮತ್ತು ಗೆಳತಿ ಜೊತೆಯಲ್ಲಿ