Sunday, April 8, 2018

ಮೈ ನೇಮ್ ಈಸ್ ರಾಜ್ ರಾಜ್ ರಾಜ

ಸುಮಾರು ಹನ್ನೆರಡು ವರ್ಷದ ಹಿಂದೆ.. ಉದಯ ಟಿವಿಯಲ್ಲಿ ಮೈತ್ರಿ ಎನ್ನುವ ನಿರೂಪಕಿ ಪ್ರವಾಸಿ ತಾಣವನ್ನು ಪರಿಚಯಿಸುವ ಕಾರ್ಯಕ್ರಮದಲ್ಲಿ ಸಿಗಂದೂರು ಕ್ಷೇತ್ರವನ್ನು ಪರಿಚಯುಸುತ್ತಿದ್ದರು.. ಲಾಂಜ್ ನಲ್ಲಿ ಹೋಗೋದು.. ಅದ್ಭುತ ಅನುಭವ ಕೊಡುವ ಬಗ್ಗೆ ಹೇಳುತ್ತಿದ್ದರು.. ಮೊದಲಿಗೆ ಅವರ ನಿರೂಪಣೆ ಆ ಜಾಗಕ್ಕೆ ಹೋಗಲೇ ಬೇಕು ಅನ್ನುವಷ್ಟು ಸ್ಫೂರ್ತಿ ಕೊಡುತ್ತಿತ್ತು.


ಪಕ್ಕದಲ್ಲಿ ರಾಜ ಕೂತಿದ್ದ......

ಲೋ ರಾಜ (ನನ್ನ ಮಾವನನ್ನು ಕರೆಯುತ್ತಿದ್ದ ಪರಿ!.. ಆ ಊರನ್ನು ನೋಡಬೇಕು ಕಣಲೇ.. !

"ಸರಿ.. ಈ ಎರಡನೇ ಶನಿವಾರ ರಜೆ ಇದೆ.. ಬುಕ್ ಮಾಡೋಣ... ಶಿವಮೊಗ್ಗದಲ್ಲಿ ನನ್ನ ಸ್ನೇಹಿತನ ಕ್ಯಾಬ್ ಇದೆ.. ಫೋನ್ ಮಾಡ್ತೀನಿ" ಅಂದ.. 

ಕೂತು ಕೂತಲ್ಲೇ ಕಾರ್ಯಕ್ರಮ ಸಿದ್ಧವಾಯಿತು.... 

ಸರಿ ಮಡದಿ ಮಗಳು ಮತ್ತೆ ರಾಜನ ಜೊತೆ ಶಿವಮೊಗ್ಗಕ್ಕೆ ಹೊರಟೇಬಿಟ್ಟೆವು... ಶುಕ್ರವಾರ ರಾತ್ರಿ.. 

ಶನಿವಾರ ಸ್ನಾನ ಸಂಧ್ಯಾವಂದನೆ ಎಲ್ಲಾ ಮುಗಿಸಿ.. ಹೊರಟಿದ್ದು ಬೆಳಿಗ್ಗೆ ಏಳು ಘಂಟೆಗೆ.. 

ವರದಹಳ್ಳಿ.. ಸಿಗಂದೂರು.. ಕೊಲ್ಲೂರು.. ಶಿವಮೊಗ್ಗ ಎನ್ನುವ ಪಟ್ಟಿ ಸಿದ್ಧವಾಗಿತ್ತು.. 

ಪುಟ್ಟಣ್ಣ ಕಣಗಾಲ್ ಅವರ ಅಮೃತಘಳಿಗೆಯ "ಹಿಂದೂಸ್ಥಾನವೂ ಎಂದೂ ಮರೆಯದ" ಹಾಡನ್ನು ನೋಡಿದಾಗಿಂದ ಆ ಪುಣ್ಯಕ್ಷೇತ್ರವನ್ನು ನೋಡುವ ಬಸುರಿ ಬಯಕೆ ಹೊತ್ತಿದ್ದ ನನಗೆ.. ಆ ಆಸೆ ಈಡೇರುವ ಖುಷಿ.. 

ಶ್ರೀಧರ ತೀರ್ಥದಲ್ಲಿ ಮೋರೆ ತೊಳೆದು... ೨೨೫ ಮೆಟ್ಟಿಲು ಹತ್ತಿ ಹೋದಾಗ ಕಂಡಿದ್ದು ಶ್ರೀಧರ  
ಸ್ವಾಮಿಗಳ ಆಶ್ರಮ.. ಮನಸ್ಸು ಹಕ್ಕಿಯ ಹಾಗೆ ಹಾರಾಡಿತ್ತು .. ಅಲ್ಲಿಂದ ಸ್ವಲ್ಪ ಮೇಲೆ ಹತ್ತಿದರೆ ಧರ್ಮಧ್ವಜ ಇರುವ ಸ್ಥಳವಿತ್ತು.. ಸುಮಾರು ಅರ್ಧ ಕಿಮೀಗಳಷ್ಟು ದೂರ ಅಷ್ಟೇ.. ಆ ಜಾಗವನ್ನು ನೋಡಬೇಕು ಅನ್ನುವ ಆಸೆ ಇತ್ತು.. ಆದರೆ ನನ್ನ ಜೊತೆ ಇದ್ದ ಮಡದಿ, ಮಗಳು.. ಮತ್ತು ರಾಜ.. ಹೋಗಲೇ ಬೇಡ.. ಹೊತ್ತಾಗುತ್ತೆ. ಸಿಗಂದೂರು ಲಾಂಜ್ ಮಿಸ್ ಆಗುತ್ತೆ ಅಂದ.. 

ಲಾಂಜ್ ಅನುಭವ ಬೇಕಿತ್ತು.. ಶ್ರೀಧರ ಸ್ವಾಮಿಗಳಿಗೆ ಅಲ್ಲಿಯೇ ನಮಿಸಿ ಮತ್ತೊಮ್ಮೆ ಬರುವೆ ಎಂದು ಸಿಗಂದೂರಿನ ಕಡೆ ಹೊರಟೆವು.. ನಾವು ಬಂದಿದ್ದ ಮಾರುತಿ ವ್ಯಾನ್ ರಸ್ತೆಯಲ್ಲಿ ಸೊಗಸಾಗಿ ನುಗ್ಗುತ್ತಿತ್ತು.. 

ನಮ್ಮ ಡ್ರೈವರ್ "ನೋಡಿ ಸರ್ ಹೊಳೆ ಬಾಗಿಲು ಬಂತು" ಅಂದ.. 

"ಬಾಗಿಲಾ? ಎಲ್ಲಿದೇರಿ ಬಾಗಿಲು.. ಹೊಳೆಗೆಂತ ಬಾಗಿಲು" ಅಂತ ತಮಾಷೆ ಮಾಡಿದೆ.. 

"ಸರ್ ಇದು ಶರಾವತಿ ನದಿಗೆ ಅಣೆಕಟ್ಟನ್ನು ಕಟ್ಟಿದಾಗ ಬಂದ ಹಿನ್ನೀರು ಈ ಪ್ರದೇಶವನ್ನು ಮುಳುಗಡೆ ಮಾಡಿತ್ತು.. ಆಗ ಸಿಗಂದೂರಿಗೂ ಮತ್ತು ಈ ಪ್ರದೇಶಕ್ಕೂ ಸೇತುವೆ ಅಂದರೆ ಈ ಲಾಂಜುಗಳೇ.... "

ಆಗಲೇ ಜನ ಜಮಾಯಿಸಿದ್ದರು.. ಬಸ್ಸುಗಳು.. ಕಾರುಗಳು, ಬೈಕು, ಸೈಕ್ಲಲ್ಲುಗಳು ನಿಂತಿದ್ದವು.. ನಾನು ಸುಮ್ಮನೆ ನೋಡುತ್ತಾ ನಿಂತಿದ್ದೆ.. ಉದಯ ಟಿವಿಯ ಕಾರ್ಯಕ್ರಮದಲ್ಲಿ ಬಸ್ಸು, ಕಾರು ಎಲ್ಲವನ್ನು ಸಾಗಿಸುತ್ತಾರೆ ಜನಗಳ ಜೊತೆಯಲ್ಲಿ ಅಂತ ತೋರಿಸಿದ್ದು ನೋಡಿದ್ದೇ.. ಈಗ ನನಗೆ ಕುತೂಹಲ ಇತ್ತು ಹೇಗಿರುತ್ತೆ, ಹೇಗೆ ನುಗ್ಗಿಸುತ್ತಾರೆ ಅಂತ.. 

ದೂರದಲ್ಲಿ ಬರುತ್ತಿದ್ದ ಲಾಂಜ್ ಹತ್ತಿರವಾಗುತ್ತಿತ್ತು.. ಅನತಿ ಕ್ಷಣದಲ್ಲಿ ನಮ್ಮ ಮುಂದೆ ಮನೆಯ ತರಹವೇ ಇದ್ದ ಲಾಂಜ್ ಬಂದು ನಿಂತಿತ್ತು.. 

ಬಸ್ಸುಗಳು, ಕಾರುಗಳು, ಜನರೂ ಎಲ್ಲವನ್ನು ತನ್ನ ಒಡಲಲ್ಲಿ ತುಂಬಿಸಿಕೊಂಡು ಹೊರಟಿತ್ತು.. ಪ್ರತಿಯೊಬ್ಬರಿಂದ ಒಂದು ರೂಪಾಯಿ ತೆಗೆದುಕೊಂಡು ಚೀಟಿ ಕೊಟ್ಟರು.. ನಾವೆಲ್ಲರೂ ಕಾರಿಂದ ಇಳಿದು ಹೊರಗೆ ಬಂದು ಹಿನೀರನ್ನು ನೋಡುತ್ತಾ ನಿಂತೆವು.. 

ಸುಮಾರು ಹತ್ತು ನಿಮಿಷಗಳ ಪಯಣ.. ಜೀವನಕ್ಕೆ ಒಂದು ಅದ್ಭುತ ಅನುಭವ ಕೊಡುವ ತಾಣವಾಗಿತ್ತು ಈ ಪಯಣ.. 

ಈ ಬದಿಯಿಂದ ಆ ಬದಿಗೆ ಹೋಗಿ ಇಳಿದು.. ಅಲ್ಲಿಂದ ಆ ಊರಿನ ಜೀಪನ್ನು ಹತ್ತಿ ದೇವಸ್ಥಾನಕ್ಕೆ ಬಂದೆವು.. ಸುಮಾರು ಒಂದೂವರೆ ಅಥವಾ ಎರಡು ಕಿಮೀಗಳ ದೂರ.. 

ಸಿಗಂದೂರನ್ನು ತನ್ನ ಅಭಯ ಹಸ್ತದಿಂದ ಕಾಪಾಡುತ್ತಿರುವ ಶ್ರೀ ಚೌಡೇಶ್ವರಿಯ ದರ್ಶನ ಮಾಡಿದೆವು.. ದೇವಿಯ ದರ್ಶನ  ಮಾಡಿ ನಮ್ಮ ನಮ್ಮ ಕೋರಿಕೆ ಸಲ್ಲಿಸಿ.. ಕೊಲ್ಲೂರಿನ ಕಡೆಗೆ ಹೊರಟೆವು.. 

ಕೊಲ್ಲೂರಿನ ದರ್ಶನ ಮೊದಲ ಬಾರಿಗೆ.. ರಂಗನಾಯಕಿ ಚಿತ್ರದಲ್ಲಿ "ಜೈ ಜಗದಂಬೆ" ಹಾಡಿನಲ್ಲಿನೋಡಿದ್ದು .. ಇಲ್ಲಿ ಸಾಕ್ಷಾತ್ಕಾರವಾಗಿತ್ತು.. ತಾಯಿ  ಮೂಕಾಂಬಿಕೆಯ ದರ್ಶನ.. ಸ್ವಲ್ಪ ಹೊತ್ತು ಅಲ್ಲೇ ಜೋತು ಮಾಡಿದ ಜಪ... ಮನಸ್ಸಿಗೆ ತಂಪಾದ ಅನುಭವ ನೀಡಿತ್ತು.. 

ಮತ್ತೆ ಶಿವಮೊಗ್ಗೆಗೆ ಬಂದು.. ಊಟ ಮಾಡಿ.. ಬಸ್ಸು ಹತ್ತಿದಾಗ  ಲೋಕವೂ ಸುಂದರವಾಗಿ ಕಾಣತೊಡಗಿತ್ತು.. 

ಈ ಲೇಖನ ಅಷ್ಟು ವರ್ಷ ಆದ ಮೇಲೆ ಬರೆಯುವ ಕಾರಣವೆಂದರೆ.. ನನ್ನ ಸೋದರ ಮಾವ ರಾಜ.. ಸುಮ್ಮನೆ ಒಂದು ಕಾರ್ಯಕ್ರಮ ಹೇಳಿದರೆ ಸಾಕು.. ಇಲ್ಲ.. ಆಗೋಲ್ಲ.. ನೋಡೋಣ ಅನ್ನುವ ಹಾರಿಕೆಯ ಉತ್ತರವೇ ಇರುತ್ತಿರಲಿಲ್ಲ.. 

ಸರಿ ಕಣೋ ನೆಡೆಯೋ.. ಅನ್ನುವ ಉತ್ತರವೇ ಸದಾ ಅವನಿಂದ.. !

ನನ್ನ ಪ್ರವಾಸದ ಹುಚ್ಚಿನ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿದ್ದು ಅವನೇ.. ದಾರಿಯುದ್ದಕ್ಕೂ ತಮಾಷೆ ಮಾತುಗಳು.. ಹಾಸ್ಯ.. ಅವನಿಂದ ನನಗೆ ಬೀಳುತ್ತಿದ್ದ ಪ್ರೀತಿಯ ಒದೆ.. ಹಾ ಹೌದು ಒದೆ.. ಅವನನ್ನು ಚೆನ್ನಾಗಿ ರೇಗಿಸುತ್ತಿದ್ದೆ.. ಕೋಪ ಬರುತ್ತಿರಲಿಲ್ಲ.. ಆದರೆ ಅವನ ನಗು ಮತ್ತು ಅವನು ಕೊಡುತ್ತಿದ್ದ ಪ್ರೀತಿಯ ಒದೆಗಳು.. ಅದಕ್ಕಿಂತ ಆತನ ತೂಗುದೀಪ ಶ್ರೀನಿವಾಸ ನಗು..ಹೌದು ಅವನ ನಗು ನನ್ನ ಕಿವಿಯಲ್ಲಿ ಯಾವಾಗಲೂ ಪ್ರತಿಧ್ವನಿಯಾಗುತ್ತಿರುತ್ತದೆ.. 

ನಮ್ಮನ್ನು ಅವನ ನೆನಪಲ್ಲಿ ಬಿಟ್ಟು ಆನಂದಲೋಕಕ್ಕೆ ತೆರಳಿ ಹತ್ತು ವರ್ಷಗಳಾಗುತ್ತಿವೆ.. ಅವನು ಇಲ್ಲ ಅನ್ನುವ  ಮಾತೆ ನನ್ನೊಳಗೆ ಬರುತ್ತಿಲ್ಲ.. ಕಾರಣ ಪ್ರತಿಯೊಂದು ದಿನ.. ಪ್ರತಿಯೊಂದು ಕ್ಷಣವೂ ಅವನ ನೆನಪು ಒಂದಲ್ಲ ಒಂದು ರೀತಿ ಕಾಡುತ್ತಿರುತ್ತಲೇ  ಇರುತ್ತದೆ.  ಅಣ್ಣಾವ್ರ ಯಾವುದೇ ಚಿತ್ರಗಳು, ಹಾಡುಗಳು, ಬಾಲಣ್ಣನ ಯಾವುದೇ ಚಿತ್ರದ ಸಂಭಾಷಣೆ.. ಅವನ ಫೇವರಿಟ್ ಸುಜುಕಿ ಸಮುರೈ.. ಅಮಿತಾಬ್ ಚಿತ್ರಗಳು.. ಹೀಗೆ ಪ್ರತಿ ಕ್ಷಣವೂ ಅವನ ಇರುವಿಕೆ ನನ್ನ ಜೊತೆಯಲ್ಲಿ ಇದ್ದೆ ಇದೆ.. 

ಇದು ನನ್ನೊಬ್ಬನೆ ಮಾತು ಮಾತ್ರವಲ್ಲ.. ಅವನನ್ನು ಒಂದು ಕ್ಷಣ ಮಾತಾಡಿಸಿದ ಪ್ರತಿಯೊಬ್ಬರ ಮಾತು ಇದೆ.. 

ರಾಜ ಇಂದು ನಿನ್ನ ಜನುಮದಿನ.. ನೀನಿಲ್ಲ ಅನ್ನುವ ಮಾತೆ ಇಲ್ಲ. ನೀ ನನ್ನೊಳಗೆ ಸದಾ ಇರುವೆ.. !

6 comments:

  1. ವಾಹ್ ಸುಂದರವಾದ ಲೇಖನ ಶ್ರೀ. ಬೆಳಗ್ಗೆ ಬೆಳಗ್ಗೆ ಸುಂದರ ತಾಣಕ್ಕೆ ಕರೆದೊಯ್ದು ನಮಗೂ ಪ್ರಕೃತಿ ಹಾಗೂ ದೇವಿಯ ದರ್ಶನ ಮಾಡಿಸಿದೆ ಧನ್ಯೋಸ್ಮಿ
    ನಿನ್ನ ರಾಜುಮಾವಗೆ ನಮ್ಮ ಕಡೆಯಿಂದ ಜನುಮ ದಿನದ ಶುಭಾಶಯಗಳು ಶ್ರೀ
    ನಮಗೆ ಅವರನ್ನು ನೋಡುವ ಭಾಗ್ಯ ಇಲ್ಲ ಆದರೆ ನಿನ್ನ ಲೇಖನದಿಂದ ಅವರನ್ನು ಚಿತ್ರಿಸಿಕೊಳ್ಳಬಹುದು
    ಧನ್ಯವಾದಗಳು

    ReplyDelete
    Replies
    1. ಧನ್ಯವಾದಗಳು ಪಿಬಿಎಸ್

      ಸೊಗಸಾದ ಪ್ರತಿಕ್ರಿಯೆ ನಿನ್ನದು.. ಅವನು ಅಜರಾಮರ

      Delete
  2. Eshtu sogasaagide...chikkappana nagu, haasya, odegalu ella haage kannu munde moodida haagide nimma barahA. Thanks a lot. Miss him a lot. Aloogedde raja anta haasya madtidda

    ReplyDelete
    Replies
    1. ಧನ್ಯವಾದಗಳು ಅಕ್ಕಯ್ಯ... ಅವನ ನೆನಪಿಲ್ಲದ ಒಂದು ಕ್ಷಣವೂ ನಾ ಉಸಿರಾಡೋಕೆ ಆಗೋಲ್ಲ.. ಅಷ್ಟು ಬೆರೆತು ಹೋಗಿದ್ದಾನೆ

      Delete
  3. ಅಣ್ಣ ಸಿಗಂಧೂರಿನ ಪ್ರಕೃತಿಯಲ್ಲಿ ಅದೆಂಥದೂ ಶಕ್ತಿ ಇದೆ.. ಚೌಡೇಶ್ವರಿ ಅಮ್ಮನವರ ಸಾನಿಧ್ಯ.. ವರದಳ್ಳಿ ಎಲ್ಲವೂ ಚೆಂದವೂ ಚೆಂದ ... ಅದ್ಭುತ ಬರವಣಿಗೆ ಅಣ್ಣ...

    ReplyDelete
    Replies
    1. ಧನ್ಯವಾದಗಳು ಡಿ ಡಿ ಪಿ.. ಸೊಗಸಾಗಿದೆ ನಿನ್ನ ಪ್ರತಿಕ್ರಿಯೆ

      Delete